Followers

About Me/ನನ್ನ ಬಗ್ಗೆ

Monday, September 30, 2013

ಸ್ವಾತಂತ್ರ್ಯ

ಕೇಳಿ ಕೇಳಿ ಸಾಕಾಗಿದೆ
ಅದೇ ಹಳೆಯ ಮಂತ್ರ
ತಂತ್ರ ಪ್ರತಿತಂತ್ರಗಳ
ನಡುವೆ ಒದ್ದಾಡುತ್ತಿದೆ ಸ್ವಾತಂತ್ರ್ಯ

ವರ್ಷ ವರ್ಷಕ್ಕೂ ಹೊಸ ಘೋಷಣೆ
ಕಾಣುತ್ತಿಲ್ಲ ಎಲ್ಲೂ ಸುಧಾರಣೆ
ಏರುತಿದೆ ವಸ್ತುಗಳ ಧಾರಣೆ
ನಿಂತಿಲ್ಲ ಬಡವರ ಶೋಷಣೆ

ಮಹಿಳೆಯರಿಗಿಲ್ಲ ರಕ್ಷಣೆ
ನಿಂತಿಲ್ಲ ವರದಕ್ಷಿಣೆ
ಅತ್ಯಾಚಾರಿಗಳಿಗಿಲ್ಲ ಎಣೆ
ಇದಕ್ಕೆಲ್ಲ ಯಾರು ಹೊಣೆ

ಇದ್ದರೂ ಸರ್ವ ಶಿಕ್ಷಾ ಅಭಿಯಾನ
ಹೆಚ್ಚುತ್ತಿಲ್ಲ ಮಕ್ಕಳ ಜ್ಞಾನ
ಕುಂಟುತ್ತಿದೆ ಸಾಕ್ಷರತೆ ಪ್ರಮಾಣ
ಆಗುತಿದೆಯೇ ನಿರಕ್ಷರಿಗಳ ತಾಣ

ಅತ್ತ ಉರಿಯುತಿದೆ ಗಡಿ
ನಿಂತಿಲ್ಲ ಭಯೋತ್ಪಾದನೆಯ ಕಿಡಿ
ಅಲ್ಲಿ ಯೋಧರ ಮರಣ
ಮಾತುಕತೆಯಲ್ಲಿ ಮಾಡುತಿರುವರು ಕಾಲಹರಣ

ಎಲ್ಲರಿಗೂ ಸಮಬಾಳು, ಎಲ್ಲರಿಗೂ ಸಮಪಾಲು
ಪ್ರತಿಯೊಂದು ಯೋಜನೆಗೂ ಬೇಕು ಅವರವರ ಪಾಲು
ಇಲ್ಲದಿದ್ದರೆ ಎಲ್ಲ ಕೆಲಸಕೂ ಕಾಲು
ನೋಡುತಿರುವೆವು ಕಛೇರಿಗಳಲಿ ಉದ್ದನೆಯ ಸಾಲು

ಒಂದೆಡೆ ಇಳಿಯುತಿದೆ ಅಂತರ್ಜಲ
ಹೆಚ್ಚುತ್ತಿದೆ ವರ್ಷ ವರ್ಷವೂ ಬರಗಾಲ
ರೈತರ ಬಾಳಲಿದೆ ಬರಿ ಸಾಲ
ಕುಡಿಯುವಂತೆ ಮಾಡಿದೆ ಹಾಲಾಹಲ

ಆದರೂ ಇದೆ ಸಾಧಿಸುವ ಛಲ
ಇದೆ ತೋಳುಗಳಲ್ಲಿ ಬಲ
ನಮ್ಮ ಶಕ್ತಿಯಲ್ಲಿದೆ ನಂಬಿಕೆ
ದಯೆ ತೋರುವಳು ಅಂಬಿಕೆ

No comments:

Post a Comment